ಶಂಬೂಕ
	ಒಬ್ಬ ಶೂದ್ರ ಮುನಿ. ವರ್ಣಾಶ್ರಮ ನೀತಿಯನ್ನು ಉಲ್ಲಂಘಿಸಿ, ಸಶರೀರವಾಗಿ ದೇವತ್ವ ಹೊಂದಬೇಕೆಂದು ಉಗ್ರ ತಪಸ್ಸನ್ನಾಚರಿಸಿದ. ಇದರಿಂದ ರಾಮನ ರಾಜ್ಯಾಡಳಿತದ ಸಂದರ್ಭದಲ್ಲಿ ಅನೇಕ ಮಕ್ಕಳು ಸಾಯಲು ಪ್ರಾರಂಭಿಸಿದವು. ಮಕ್ಕಳ ಪೋಷಕರು, ಬಂಧು-ಬಳಗ ವ್ಯಥೆಗೆ ಒಳಗಾದರು. ರಾಮನನ್ನೂ ಅವನ ರಾಜ್ಯಾಡಳಿತದ ದಕ್ಷತೆಯನ್ನೂ ನಿಂದಿಸತೊಡಗಿದರು. ಇದರಿಂದ ರಾಮ ವಸಿಷ್ಠರೊಂದಿಗೆ ಸಮಾಲೋಚಿಸಿ, ತನ್ನ ರಾಜ್ಯದಲ್ಲಿ ಜೀವನಧರ್ಮಕ್ಕೆ ವಿರುದ್ಧವಾದ ಕಾಯಕದಲ್ಲಿ ತೊಡಗಿದವರನ್ನು ಕಂಡುಹಿಡಿಯಲು ದೇಶ ಪರ್ಯಟನೆ ಕೈಗೊಂಡ. ಶಂಬೂಕ ತಲೆಕೆಳಗಾಗಿ ನೇತಾಡುತ್ತ, ಬೆಂಕಿಯ ಹೊಗೆಯನ್ನು ಸೇವಿಸಿ ತಪಸ್ಸು ಮಾಡುತ್ತಿದ್ದ. ಇದನ್ನು ಕಂಡ ರಾಮನು ಮಕ್ಕಳ ಸಾವಿಗೆ ಶಂಬೂಕನ ವರ್ಣಾಶ್ರಮ ಧರ್ಮದ ಉಲ್ಲಂಘನೆ ಕಾರಣವೆಂದು ಈತನನ್ನು ಕೊಂದ. ಈ ಕಥೆ ರಾಮಾಯಣದ ಉತ್ತರಕಾಂಡದಲ್ಲಿ ವರ್ಣಿತವಾಗಿದೆ. ಕನ್ನಡದ ಪ್ರಸಿದ್ಧ ಕವಿ, ನಾಟಕಕಾರರಾದ ಕುವೆಂಪು ಅವರಿಂದ ಪೂರ್ವದ ಜೀವವಿರೋಧಿ ಕಥೆ ರೂಪಾಂತರಗೊಂಡು ಜೀವಪರವಾದ ಕಥೆಯಾಗಿ ಶೂದ್ರತಪಸ್ವಿ ಎಂಬ ನಾಟಕವಾಗಿದೆ. 
													*

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ